ಗ್ರೌಬುಂಡೆನ್

	ಸ್ವಿಟ್‍ಜರ್ಲೆಂಡಿನ ಪೂರ್ವದ ಅಂಚಿನಲ್ಲಿ ಇರುವ ಅತ್ಯಂತ ದೊಡ್ಡ ಮಂಡಲ (ಕ್ಯಾಂಟನ್). ವಿಸ್ತೀರ್ಣ 2,750 ಚ. ಮೈ. ಜನಸಂಖ್ಯೆ 1,47,458 (1960). ಗ್ರೌಬುಂಡೆನ್ ಮಂಡಲದ 138.6 ಚ. ಮೈ. ಪ್ರದೇಶ ಹಿಮನದಿಗಳಿಂದ ಕೂಡಿದೆ. ಉತ್ತರದ ಟಡಿ, ನೈಋತ್ಯದ ಮೆಡೆಲ್ಸ್ ಆಡೂಲಾ ಗುಂಪು ಮತ್ತು ರೈನ್‍ವಾಲ್ಡ್ ಹಾರ್ನ್, ಆಗ್ನೇಯದ ಬೆರ್ನೀನಾ, ಪೂರ್ವದ ಪೀಟ್ಸಕೆಷ್ ಮತ್ತು ಈಶಾನ್ಯದ ಪೀಟ್ಸ್ ಲಿನಾರ್ಡನ್ನೊಳಗೊಂಡ ಸಿಲ್ವರೆಟ ಗುಂಪು-ಈ ಉನ್ನತ ಪ್ರದೇಶಗಳಲ್ಲಿ ಹಿಮನದಿಗಳಿವೆ.

	ಸ್ವಿಟ್‍ಜರ್ಲೆಂಡಿನ ರ್ಹೈನ್ ಮತ್ತು ಇನ್ ನದಿಗಳೂ ಪೋ ನದಿಯ ಉಪನದಿಗಳಿಗೂ ನೀರು ಒದಗಿಸುವುದು ಈ ಪ್ರದೇಶವೇ. ಇಲ್ಲಿಯ ಕಣಿವೆಗಳು ಕಿರಿದಾಗಿವೆ ; ಸಾಗುವಳಿ, ಪಶುಪಾಲನೆಗಳಿಗೆ ಉಪಯುಕ್ತವಾದ ಫಲವತ್ತಾದ ಭೂಮಿಯಿಂದ ಕೂಡಿವೆ. ಪೂರ್ವಭಾಗದಲ್ಲಿರುವ ಮೇಲಿನ ಮತ್ತು ಕೆಳಗಿನ ಇಂಗಡೈನ್ ಕಣಿವೆಗಳು ಉಳಿದವಕ್ಕಿಂತ ಅಗಲವಾಗಿವೆ. ರ್ಹೈನ್ ನದಿ ಹರಿಯುವುದು ಇಲ್ಲೇ. ಕಣಿವೆ ಪ್ರದೇಶಗಳಲ್ಲಿ ಬೆಚ್ಚನೆಯ ಹಿತಕರ ಹವೆ ಇರುತ್ತದೆ.

	ಗ್ರೌಬುಂಡೆನಿನ ಕಣಿವೆಗಳಲ್ಲಿ ಆಲ್ಪ್ಸ್ ಪರ್ವತ ಪ್ರದೇಶದ ಅತ್ಯಂತ ಸುಂದರವಾದ ತಾಣಗಳಿವೆ. ಕಣಿವೆ ಪ್ರದೇಶಗಳಲ್ಲಿ ಒಳ್ಳೆಯ ರಸ್ತೆಗಳನ್ನು ನಿರ್ಮಿಸಿದ್ದಾರೆ. ಖನಿಜಾಂಶ ಒಳಗೊಂಡ ನೀರಿನ ಅನೇಕ ಚಿಲುಮೆಗಳು ಇಲ್ಲಿವೆ. ಒತ್ತಾದ ಅರಣ್ಯಗಳೂ ಉಂಟು. ಪಶುಪಾಲನೆ, ಕೃಷಿಗಳ ಜೊತೆಗೆ ಪ್ರವಾಸೋದ್ಯಮವೂ ಇಲ್ಲಿಯವರ ಒಂದು ಜೀವನೋಪಾಯ.

	ಈ ಮಂಡಲದ ರಾಜಧಾನಿ ಕೂರ್. ಕೂರ್, ದಾವೋಸ್, ಸೇಂಟ್ ಮರಿಟ್ಸ್ ಮತ್ತು ಆರೋಸಾ ಪ್ರವಾಸ ಕೇಂದ್ರಗಳು. ಕೂರ್‍ನಿಂದ ಇಟಲಿಗೆ ರೈಲು ಸಂಪರ್ಕವುಂಟು.

	ಕೂರ್, ಆರೋಸ ಮತ್ತು ದಾವೋಸಗಳಲ್ಲಿ ಜನ ಮುಖ್ಯವಾಗಿ ಜರ್ಮನ್‍ಭಾಷೆ ಆಡುತ್ತಾರೆ. ದಕ್ಷಿಣ ಭಾಗಗಳಲ್ಲಿ ಇಟಾಲಿಯನ್ ಭಾಷೆಯೂ ಪ್ರಚಾರದಲ್ಲಿದೆ. ಇಂಗಡೈನ್ ಮತ್ತು ಸುತ್ತಣ ಕಣಿವೆಯ ಜನ ರೊಮಾನ್ಷ್ ಭಾಷೆ ಆಡುತ್ತಾರೆ. ಆಧುನಿಕ ಗ್ರೌಬುಂಡೆನ್ ಮಂಡಲದ ಬಹುಭಾಗ ಹಿಂದೆ ರೇಟಿಯ ಪ್ರಾಂತ್ಯವಾಗಿತ್ತು. ರೋಮನರು ಕ್ರಿ. ಪೂ. 15ರಲ್ಲಿ ಈ ಭಾಗವನ್ನು ಗೆದ್ದುಕೊಂಡಿದ್ದರು. ಈಚೆಗೆ ಬಹಳ ಕಾಲ ಜರ್ಮನಿಯ ಒಂದು ಭಾಗವಾಗಿದ್ದ ಗ್ರೌಬುಂಡೆನ್ 1803 ರಲ್ಲಿ ಸ್ವಿಟ್‍ಜರ್ಲೆಂಡಿಗೆ ಸೇರಿತು.

	ಜರ್ಮನ್ ಭಾಷೆಯಲ್ಲಿ ಗ್ರೌ ಎಂದರೆ ಬೂದು ಬಣ್ಣ. 14 ನೆಯ ಶತಮಾನದ ಅಂತ್ಯ ಮತ್ತು 15 ನೆಯ ಶತಮಾನದ ಆರಂಭಕಾಲದಲ್ಲಿ ಈ ಪ್ರದೇಶದ ಆಳರಸರ ವಿರುದ್ಧ ಸಂಘಟಿತರಾದ ಜನರು ಮನೆಯಲ್ಲಿ ನೇದ, ಬೂದು ಬಣ್ಣದ ಮೇಲುಡುಗೆ ತೊಡುತ್ತಿದ್ದುದರಿಂದ ಈ ಪ್ರದೇಶಕ್ಕೆ ಗ್ರೌಬುಂಡೆನ್ ಎಂದು ಹೆಸರು ಬಂತೆಂದು ಹೇಳಲಾಗಿದೆ.
(ಎಸ್.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ